ಕಂಗೊಂದಿ ಬಳ್ಳಿ : ಸಿಲ್ಯಾಸ್ಟ್ರೇಸಿ ಕುಟುಂಬದ ಒಂದು ಪ್ರಭೇದ (ಸಿಲ್ಯಾಸ್ಟ್ರಸ್ ಪ್ಯಾನಿಕ್ಯುಲೇಟಸ್). ಭಾರತ, ಸಿಂಹಳ, ಮಲಯ ಹಾಗೂ ಫಿಲಿಪೀನ್ಸ ದ್ವೀಪಗಳಲ್ಲಿ ಕಾಣಬರುತ್ತದೆ. ಸಾಮಾನ್ಯವಾಗಿ ಗುಡ್ಡಗಾಡು ಜಿಲ್ಲೆಗಳಿಗೆ ಸೀಮಿತಗೊಂಡಿದ್ದು ಸು. 4000, ಎತ್ತರದ ಪ್ರದೇಶಗಳಲ್ಲೂ ಬೆಳೆಯುತ್ತದೆ. ಬಳ್ಳಿಯಂತೆ ಹಬ್ಬಿ ಬೆಳೆಯುವ ಪೊದೆಸಸ್ಯವಿದು. ಬೆಳೆಯುತ್ತಿರುವ ಕವಲುಗಳ ಮೇಲೆ ಮಸೂರದ ಆಕಾರದ (ಲೆನ್ಸ್‌ ಆಕಾರದ) ಗಂಟುಗಳಿವೆ. ಮುಳ್ಳುಗಳಿಲ್ಲ. ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿರುವ ಎಲೆಗಳಿವೆ. ಅವು ಅಂಡಾಕಾರ ಅಥವಾ ದೀರ್ಘವೃತ್ತಾಕಾರದವು. ಅಲಗಿನ ತುದಿ ಮೊನಚು. ಅಂಚು ಗರಗಸದ ಹಲ್ಲಿನಂತೆ. ಮೈನುಣುಪು. ಹೂಗೊಂಚಲು ಸಂಕೀರ್ಣ ಪುಷ್ಪಗುಚ್ಛ ಮಾದರಿಯದು; 2"-6" ಉದ್ದ. ಹೂಗೊಂಚಲಿನ ತೊಟ್ಟಿನ ಮೇಲೆ ಮೃದು ತುಪ್ಪಳದ ಹೊದಿಕೆಯಿದೆ. ಹೂಗಳು ಏಕಲಿಂಗಗಳು. ಬಣ್ಣ ಹಳದಿ ಅಥವಾ ಹಸಿರುಮಿಶ್ರಿತ ಬಿಳಿ. ಹೂಗಳಲ್ಲಿ ಬೇಗ ಉದುರುಹೋಗುವಂಥ ಅನೇಕ ಚಿಕ್ಕ ಚಿಕ್ಕ ಉಪಪತ್ರಗಳು (ಬ್ರಾಕ್ಟ್‌್ಸ) ಇರುವುದು ಈ ಬಳ್ಳಿಯ ವೈಶಿಷ್ಟ್ಯ. ಪುಷ್ಪಪತ್ರ (ಸೆಪಲ್ಸ್‌) ಮತ್ತು ಪುಷ್ಪದಳಗಳ (ಪೆಟಲ್ಸ್‌) ಸಂಖ್ಯೆ ತಲಾ ಐದು. ಗಂಡು ಹೂವಲ್ಲಿ ದಳಗಳಿಂದ ಆವರಿಸಿಕೊಂಡಂತೆ ಒಂದು ತಟ್ಟೆಯಿದೆ (ಡಿಸ್ಕ್‌). ಇದರ ಬುಡಕ್ಕೆ ಐದು ಕೇಸರಗಳು ಅಂಟಿಕೊಂಡಿವೆ. ಕೆಲವೊಮ್ಮೆ ಗಂಡುಹೂವಿನಲ್ಲಿ ಬಂಜೆ ಅಂಡಾಶಯ (ಪಿಸ್ಟಿಲೋಡ್) ಇರುವುದೂ ಉಂಟು. ಹೆಣ್ಣುಹೂವಿನಲ್ಲಿ ಗಂಡು ಹೂವಿನಲ್ಲಿರುವಷ್ಟೇ ಸಂಖ್ಯೆಯ ಪುಷ್ಪಪತ್ರ ಮತ್ತು ದಳಗಳೂ ಮೂರು ಕಾರ್ಪೆಲುಗಳನ್ನೊಳಗೊಂಡ ಉಚ್ಚಸ್ಥಾನದ ಅಂಡಾಶಯವೂ ಇವೆ. ಶಲಾಕೆ ಚಿಕ್ಕದು. ಶಲಾಕಾಗ್ರ ಮೂರು ಭಾಗಗಳಾಗಿ ಒಡೆದಿದೆ. ಕಾಯಿ ಸಂಪುಟ ಮಾದರಿಯದು. ಬಣ್ಣ ಹಚ್ಚಹಳದಿ. ಒಳಗೆ 1-6 ಅಂಡಾಕಾರದ ಕಂದು ಬಣ್ಣದ ಬೀಜಗಳಿವೆ. ಬೀಜದ ಸುತ್ತ ಕಂದುಗೆಂಪು ಬಣ್ಣದ, ಮೃದುವಾದ, ತಿರುಳಿನಂಥ ಹೊರಹೊದಿಕೆಯಿದೆ (ಏರಿಲ್).

ಕಂಗೊಂದಿ ಬಳ್ಳಿಯಲ್ಲಿ ಹಲವಾರು ಔಷಧವಸ್ತುಗಳಿವೆ. ಇದರಿಂದಾಗಿ ಈ ಬಳ್ಳಿ ತುಂಬ ಉಪಯುಕ್ತವೆನಿಸಿದೆ. ಮಿತಿಮೀರಿದ ಅಫೀಮು ಸೇವನೆಯಿಂದ ಉಂಟಾದ ವಿಷಕಾರಿ ಪರಿಣಾಮದ ಪರಿಹಾರಕ್ಕೆ ಎಲೆಗಳ ರಸವನ್ನು ಬಳಸುತ್ತಾರೆ. ತೊಗಟೆಯಲ್ಲಿ ಗರ್ಭಸ್ರಾವಕಗಳಿವೆ. ಬೀಜಕ್ಕೆ ಕಾಮೋದ್ದೀಪಕ ಹಾಗೂ ಸ್ವೇದಕಾರಿ ಗುಣಗಳಿವೆ. ಕಹಿಯಾದ್ದರಿಂದ ತಿಂದರೆ ವಾಂತಿಯಾಗುತ್ತದೆ. ಹಸಿ ಬೀಜಗಳನ್ನು ಜಜ್ಜಿ ತೆಗೆದು ಕೆಂಪು ಮಿಶ್ರಿತ ಹಳದಿ ಬಣ್ಣದ ಎಣ್ಣೆಯನ್ನು ಪಾಶರ್ವ್‌ವಾಯು, ಕುಷ್ಠರೋಗ ಮತ್ತು ಸಂಧಿವಾತ ರೋಗಗಳಿಗೆ ಸಿದ್ಧೌಷಧವಾಗಿ ಉಪಯೋಗಿಸುತ್ತಾರೆ. ಬೀಜಗಳನ್ನು ಜಜ್ಜಿ ಬಟ್ಟಿಯಿಳಿಸುವುz Àರಿಂದ ಒಂದು ಬಗೆಯ ಕಪ್ಪು ಬಣ್ಣದ ಎಣ್ಣೆ ಬರುವುದು. ಇದಕ್ಕೆ ಓಲಿಯಮ್ ನೈಗ್ರಮ್ ಎಂದು ಔಷಧಶಾಸ್ತ್ರೀಯ ಹೆಸರಿದೆ. ಇದನ್ನು ಸ್ವೇದಕಾರಿಯಾಗಿ ಉಪಯೋಗಿಸುತ್ತಾರೆ. ಬೀಜಗಳಲ್ಲಿ ಹಲವಾರು ಬಗೆಯ ಸ್ನಿಗ್ದ ಆಮ್ಲಗಳೂ ಅದರ ಹೊರಹೊದಿಕೆಯಲ್ಲಿ (ಏರಿಲ್) ಸಿಲ್ಯಾಸ್ಟ್ರಿನ್ ಮತ್ತು ಪ್ಯಾನಿಕುಲೇಟಿನ್ ಎಂಬ ಸಸ್ಯಕ್ಷಾರಗಳೂ ಇವೆ. (ಕೆ.ಎಸ್.ಎನ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ